ಕೃಪಾನಿಧಿ, ಜಿ ವಿ
  ಭಾರತದ ಒಬ್ಬ ಪತ್ರಕೋದ್ಯಮಿ, ಸಂಪಾದಕ, ಎಂ.ಎ., ಎಲ್.ಎಲ್.ಬಿ. ಪದವೀಧರರಾಗಿ, ಮದರಾಸಿನ ಸ್ವರಾಜ್ಯ ಪತ್ರಿಕೆಯ ಉಪ ಸಂಪಾದಕರಾಗಿ ಕೆಲಸಕ್ಕೆ ಸೇರಿಕೊಂಡು, ಪತ್ರಿಕೋದ್ಯಮದಲ್ಲಿ ಅನುಭವಗಳಿಸಿ, ನವದೆಹಲಿಯ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ವಿಶೇಷ ವರದಿಗಾರರಾಗಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ಅಲ್ಲಿಯ ಇಂಗ್ಲೀಷ್ ದಿನಪತ್ರಿಕೆಯಾದ ಇಂಡಿಯನ್ ನ್ಯೂಸ್ ಕ್ರಾನಿಕಲ್ ಪತ್ರಿಕೆಯ ಸಂಪಾದಕರಾದರು. ಅನಂತರ ಅವರು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಸಹಸಂಪಾದಕರಾಗಿ ಆ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಇದ್ದರು.

 ನಿವೃತ್ತಿಯ ಅನಂತರ 1958ರಲ್ಲಿ  ಮದ್ರಾಸಿಗೆ ಬಂದು ನೆಲೆಸಿ, ಅಲ್ಲಿ ದಕ್ಷಿಣಭಾರತದ ಭಾಷೆಗಳ ಸಂಘದ ವ್ಯವಸ್ಥಾಪಕರಾಗಿ ನೇಮಕವಾದರು. ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪುಸ್ತಕಗಳ ಭಾಷಾಂತರ ಮತ್ತು ಪ್ರಕಟಣೆಗೆ ಯೋಜನೆಯನ್ನು ತಯಾರಿಸಿ, ಆ ಭಾಷೆಗಳಲ್ಲಿ ಅನೇಕ ಪುಸ್ತಕಗಳು ಪ್ರಕಟವಾಗಲು ಕಾರಣರಾದರು.

ಪುನಃ ಪತ್ರಿಕೋದ್ಯಮ ಅವರನ್ನು ಸೆಳೆಯಿತು. ಬೆಂಗಳೂರಿನ ಡೆಕ್ಕನ್ ಹೆರಲ್ಡ್ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡು, ಅನೇಕ ವರ್ಷಗಳ ಕಾಲ ಅದರ ಸೇವೆ ಮಾಡಿದರು. ಸುದ್ದಿಗಳ ತಲೆಬರೆಹಗಳು, ವಾರಪತ್ರಿಕೆಯ ವಿಶೇಷ ಪುರವಣಿ, ಕ್ರೀಡಾಪುಟ, ಸುದ್ಧಿಚಿತ್ರಗಳ ಪ್ರಕಟಣೆ ಮುಂತಾದ ವಿಚಾರಗಳಲ್ಲಿ ಸುಧಾರಣೆ ತಂದುದಲ್ಲದೆ, ತಲೆಬರೆಹಗಳನ್ನು ಹೆಚ್ಚು ಆಕರ್ಷಕವಾಗಿ ಮಾಡಲೂ ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲೂ ಪ್ರಯತ್ನಿಸಿದರು. ಡೆಕ್ಕನ್ ಹೆರಲ್ಡ್ ಪತ್ರಿಕೆ ಇನ್ನೂ ಹೆಚ್ಚು ಜನಪ್ರಿಯವಾಗಲು ಶ್ರಮಿಸಿದರು. ಅವರು ಅನೇಕ ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಶಿಕ್ಷಣ ಸಲಹಾ ಸಮಿತಿಯ ಸದಸ್ಯರಾಗಿದ್ದರು. 1970ರಲ್ಲಿ ಅವರು ನಿಧನ ಹೊಂದಿದರು.						 (ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ